
ನಮ್ಮ ದೇಶದ ಜೀವಾಳ ಹಳ್ಳಿಗಳು. ನಿಜ ಹಳ್ಳಿಗಳನ್ನು ನಿರ್ಲಕ್ಷಿಸಿದರೆ ನಮಗೆ ಉಳಿಗಾಲವಿಲ್ಲ. ನಮ್ಮೆಲ್ಲರ ಉಳಿವೂ ಅಳಿವೂ ಹಳ್ಳಿಗಳಲ್ಲಿದೆ. ನಾವೂ ಹಳ್ಳಿಗಳನ್ನು ಉಳಿಸಿದರೆ ಹಳ್ಳಿಗಳು ನಮ್ಮನ್ನು ಉಳಿಸುತ್ತವೆ. ಆದರೆ ಇತ್ತಿಚೆಗೆ ಹಳ್ಳಿಯನ್ನ ಬಿಟ್ಟು ನಗರಗಳಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಅಗುತ್ತಾ ಇದೆಯೆ ಹೊರತು ಕಡಿಮೆ ಅಗುತಿಲ್ಲಾ . ಇದಕೆಲ್ಲಾ ಮೂಲ ಕಾರಣ ನಗರ ಪ್ರದೇಶಗಳ ಮೇಲೆ ನಮಗೆ ಇರುವ ವ್ಯಾಮೋಹ, ಹಣ ಗಳಿಸುವ ಆಸೆ ಅಷ್ಟೆ. ಕರ್ನಾಟಕದಲ್ಲಿ ಇದು ಜಾಸ್ತಿ ಅಗ್ತಾ ಇದೆ , ಎಲ್ಲಾ ಪ್ರದೇಶಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಜಾಸ್ತಿನೆ ಇದೆ. ಅದೇನು ಮೊಡಿ ಮಾಡಿದೆಯೊ ಈ ಬೆಂಗಳೂರು ಹಳ್ಳಿ ಜನತೆಗೆ, ಆ ಕೆಂಪೇಗೌಡರಿಗೆ ಗೊತ್ತು. ನೀವು ಕೂಡ ಬೇರೆ ಕಡೆ ಇಂದ ಅಂದ್ರೆ ಹಳ್ಳಿಯಿಂದಾನೆ ಬಂದವರಾಗಿದ್ರೆ ನಿಮಗೆ ಗೊತ್ತಿರುತ್ತೆ ಬಿಡಿ. ಬೆಂಗಳೂರಿನಲ್ಲ್ಲಿ ಒಂದು ವಾರ ದ ಮಟ್ಟಿಗೆ ಹೊಸ ನಿಯಮ ತರಬೇಕು ಅದೇನು ಅಂತಿರಾ ಬೆಂಗಳೂರಿಗೆ ಬೇರೆ ಕಡೆ ಇಂದ ಬಂದವರು ತಮ್ಮ ತಮ್ಮ ಊರಿಗೆ ಹೊಗ್ಬೇಕು ಅಂಥಾ. ಆವಗ ಇಲ್ಲಿ ಉಳಿಯೊದು BMTC ಬುಸ್ಸುಗಳು ಬಿಟ್ರೆ ಕಟ್ಟಡಗಳು ಅಷ್ಟೆ.
ಉಳುವ ಯೋಗಿಯ ನೋಡಲ್ಲಿ!
ದಕ್ಷಿಣಾಯಣ ಮುಗಿದು ಉತ್ತರಾಯಣ ಪುಣ್ಯಕಾಲ ಪ್ರಾರಂಭದ ದಿನ ಮಾಗಿಯ ಚಳಿ ಮುಗಿದು ಸೂರ್ಯ ತನ್ನ ಅಧಿಪತ್ಯವನ್ನು ಸ್ಥಾಪಿಸುವ ದಿನ. ಹಿಂದೂ ಧಾರ್ಮಿಕರಲ್ಲಿ ಭಾರೀ ಸಡಗರದ ಸಂಭ್ರಮದ ದಿನ. ಮನೆಮನೆಗಳಲ್ಲಿ ದೇವರ ಪೂಜೆ ಇತ್ಯಾದಿ ಮುಗಿಸಿ ಭರ್ಜರಿಯಾಗಿ ಹುಗ್ಗಿಯ ಊಟ ಹೊಡೆದು ಪುಟಾಣಿ ಹೆಣ್ಣುಮಕ್ಕಳಿಗೆ ಜರಿ ಲಂಗ ತೊಡಿಸಿ ಸಡಗರದಿಂದ ಎಳ್ಳು ಬೆಲ್ಲ ಬೀರಲು ಕಳಿಸುವ ತವಕ. ಅಂಗಡಿಯಿಂದ ತಂದ ಕಬ್ಬಿನ ಜಲ್ಲೆ, ಬೆಂಡು ಬತ್ತಾಸು, ಚುರುಮುರಿ, ಕುಸುರೆಳ್ಳು, ಸಕ್ಕರೆ ಅಚ್ಚು ಬಂಧುಬಾಂಧವರಿಗೆ ನೀಡುತ್ತ 'ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ' ಎಂದು ಹೇಳುವುದು ಹೇಳಿಸಿಕೊಳ್ಳುವುದು ಅಚ್ಚುಮೆಚ್ಚು.ಇದೆಲ್ಲಾ ಸರಿ. ಆದರೆ, ಇಳೆ ತುಂಬ ನಳನಳಿಸುವ ಬತ್ತದ ಹೊದಿಕೆಯನ್ನು ತುಂಬಿಸುವ, ಗಿಡಮರಗಳಿಗೆಲ್ಲಾ ಕೆಂಜಿಗುರು ಬಣ್ಣದ ಓಕುಳಿ ತುಂಬಿಸುವ ಭೂತಾಯಿಯನ್ನು, ಬೀಸುವ ಗಾಳಿಗೆ ತೂಗಾಡುತ್ತಾ ನಲಿದಾಡುವ ತೆನೆಗಳಿಗೆ ಹೊಂಬಣ್ಣದ ರಂಗುನ್ನು ತುಂಬುವ ನೇಸರನನ್ನು, ಚಳಿ ಗಾಳಿಯನ್ನು ಲೆಕ್ಕಿಸದೆ ನೇಗಿಲನ್ನು ಎಳೆದೆಳೆದು ಜಗತ್ತಿಗೆ ತುತ್ತನ್ನು ನೀಡುವ ನೇಗಿಯ ಯೋಗಿಯನ್ನು, ನೇಗಿಲ ಯೋಗಿಗೆ ಹೆಗಲನ್ನು ನೀಡುವ ಎತ್ತುಗಳನ್ನು ಪೂಜಿಸುವವರು ಯಾರು? ಏನನ್ನೂ ಬೇಡದ ಅವುಗಳಿಗೆ ಅರಿಷಿಣ ಕುಂಕುಮ ಏರಿಸಿ, ನಾವೆಂದಿಗೂ ನಿಮ್ಮ ಜೊತೆಗಿದ್ದೇವೆ ಅಂತ ಭಕ್ತಿಯಿಂದ ಕೈಮುಗಿಯುವವರು ಯಾರು?
ಹಳ್ಳಿಗಳು ಇಂದು ಹಳ್ಳಿಗಳಾಗಿ ಉಳಿದಿಲ್ಲ. 'ಉಳುವ ಯೋಗಿಯ ನೋಡಲ್ಲಿ ಉಳುವ ಯೋಗಿಯ ನೋಡಲ್ಲಿ' ಅಂದವರು, ಇಂದು ನಗರಗಳಲ್ಲಿ ಮನೆ ತಾರಸಿಗೆ ಸಿಮೆಂಟು ಕಲಸಿ ಹಾಕುವ, ಮನೆ ಚಾಕರಿಗಳಲ್ಲಿ ನಿರತರಾಗಿರುವ, ರಸ್ತೆ ಡಿವೈಡರುಗಳಿಗೆ ಹಳದಿ ಕಪ್ಪು ಬಣ್ಣ ಬಳಿಯುವ, ಸೆಕ್ಯುರಿಟಿ ಗಾರ್ಡ್ ಆಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ ದುಡಿಯುವ, ಯಾವುದೋ ಕಂಪನಿಗೆ ಪ್ಯೂನ್ ಆಗಿರುವ ಯೋಗಿಯನ್ನು ತೋರಿಸುವ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲಂತೂ ಇದು ಅಕ್ಷರಶಃ ಸತ್ಯ. ಉತ್ತರ ಕರ್ನಾಟಕದ ಅನೇಕ ರೈತ ಕುಟುಂಬಗಳು ಗುಳೆಎದ್ದು ಬೆಂಗಳೂರಿಗೆ ಬಂದಿವೆ. 'ದುಡಿಮೆಯೆ ಬಡತನ ಅಳಿಸಲು ಸಾಧನ' ಅಂತ ಹಾಡಿದ ರೈತ ಹಳ್ಳಿಯಲ್ಲಿ ಅನುಭವಿಸಿದ ಬಡತನ ಅಳಿಸಿಹಾಕಲು ನಗರಕ್ಕೆ ಬಂದು ಕುಳಿತಿದ್ದಾನೆ. ಹೆಂಡತಿ ಮನೆಗೆಲಸ ಮಾಡಿ ಸಾವಿರದೈನೂರು ಎರಡುಸಾವಿರ ಗಳಿಸುತ್ತಾಳೆ. ಗಂಡ ಅದೂ ಇದೂ ಚಾಕರಿ ಮಾಡಿ ಏನಿಲ್ಲವೆಂದರೂ ಐದಾರು ಸಾವಿರ ಗಳಿಸುತ್ತಾನೆ. ಹಳ್ಳಿಯಲ್ಲಿದ್ದರೆ ಇದು ಸಾಧ್ಯವಿತ್ತಾ? ಮಕ್ಕಳನ್ನು ಶಾಲೆಗೆ ಕಳಿಸುವುದು ಶಕ್ಯವಿತ್ತಾ? ಗದ್ದೆಗಳಲ್ಲಿ ದುಡಿಯದಿದ್ದರೇನಾಯಿತು ನಗರ ಕೈತುಂಬ ಕಾಸು ನೀಡಿದೆ ಎಂದು ತರ್ಕಬದ್ಧವಾಗಿ ಮಾತಾಡಲು ಶುರು ಮಾಡಿದ್ದಾನೆ ರೈತ.
ರೈತನ ಜೀವನ ಹೇಗೋ ಏನೋ ಒತ್ತಟ್ಟಿಗಿರಲಿ, ಇಂದಿನ ಪೀಳಿಗೆಯ ನಗರದ ಮಕ್ಕಳಿಗೆ, ನಗರದಲ್ಲೇ ಬೆಳೆದು ದೊಡ್ಡವರಾದ ದೊಡ್ಡವರಿಗೆ ನಾಡಿನ ಜೀವನಾಡಿಯಾಗಿರುವ ಉಳುಮೆ, ಬಿತ್ತನೆ, ರೈತನ ದುಡಿಮೆ, ಹೊಲ-ಗದ್ದೆ ಇವುಗಳ ಬಗ್ಗೆ ಕಲ್ಪನೆಯಾದರೂ ಎಷ್ಟಿದೆ? ಬಸ್ಸಿನಲ್ಲೋ ರೈಲಿನಲ್ಲೋ ಹೋಗುವಾಗ ಮತ್ತು ಟಿವಿಗಳಲ್ಲಿ ನೋಡಿದ್ದೆಷ್ಟೋ ಅಷ್ಟು. ಹಳ್ಳಿಯಲ್ಲಿದ್ದ ಅಜ್ಜ ಅಜ್ಜಿಯರೇ ಪಟ್ಟಣ ಬಂದು ಸೇರಿಯಾದ ಮೇಲೆ ಮೊಮ್ಮಕ್ಕಳು ಹಳ್ಳಿಗೆ ಹೋಗಿಯಾದರೂ ಏನು ಮಾಡುತ್ತವೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಬಲು ಕಷ್ಟ.
ನಗರದ ಮಕ್ಕಳಿಗೆ ಶಾಲಾ ಅಧ್ಯಯನ ಪ್ರವಾಸ ಕೈಗೊಳ್ಳುವ ಶಿಕ್ಷಕರು ಯಾವುದೋ ಊರು, ಯಾವುದೋ ಫ್ಯಾಕ್ಟರಿ, ಯಾವುದೋ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗುವ ಬದಲು ಹಳ್ಳಿಗಳಿಗೆ ಏಕೆ ಕರೆದುಕೊಂಡು ಹೋಗಬಾರದು? ಅಲ್ಲಿನ ಹೊಲಗಳು, ರೈತರು, ಅವರ ಜೀವನ, ಗದ್ದೆಯ ಮೊಣಕಾಲುದ್ದ ಕೆಸರಿನಲ್ಲಿ ನಾಟಿ ಮಾಡುವುದನ್ನು, ಬೆಳೆದ ಬೆಳೆ ಸಂಸ್ಕರಿಸುವುದನ್ನು, ಹಳ್ಳಿಯ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯ ಏಕೆ ಮಾಡಿಕೊಡಬಾರದು? ಇಂಥದೊಂದು ಪ್ರಯೋಗವನ್ನು ಸರ್ಕಾರವೇ ಮಾಡಬೇಕು. ನಗರದ ಟೆಕ್ಕಿಗಳಾದರೂ ಅಷ್ಟೇ, ವೀಕೆಂಡು ಬಂದರೆ ಟ್ರೆಕ್ಕಿಂಗು, ಸರ್ಫೀಂಗು, ಸೈಟ್ ಸೀಯಿಂಗು ಅಂತ ಹೆಂಡತಿ ಮಕ್ಕಳೊಡನೆ ತಿರುಗಾಡುವ ಬದಲು ಹಳ್ಳಿ ಜೀವನದ ಪರಿಚಯ ಮಾಡಿಕೊಳ್ಳಬಾರದೇಕೆ? ಮಡಿಕೇರಿಗಳಲ್ಲಿನ ಹೋಂಸ್ಟೇ ತರಹ ಹಳ್ಳಿಜೀವನದ ಪರಿಕಲ್ಪನೆಗೆ ಮುನ್ನುಡಿ ಹಾಡಬಾರದೇಕೆ?
very nice i like villages me also from village
ReplyDeleteThank you perfect
ReplyDelete